-->

ಅಭಿವೃದ್ಧಿಯ ಅಂಧಯುಗಅಭಿವೃದ್ಧಿಯ ಅಂಧಯುಗ

Feliyo | Thursday, 13 May 2021
  ಅಭಿವೃದ್ಧಿಯ ಅಂಧಯುಗಅಭಿವೃದ್ಧಿಯ ಅಂಧಯುಗ
   -ಲೀಲಾ ಗರಡಿ

ಇದರಲ್ಲಿ 'ಪ್ರಜಾವಾಣಿ' 'ಅಡಿಕೆ ಪತ್ರಿಕೆ', ಮತ್ತು ಇತರ ಪತ್ರಿಕೆಗಳಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಪರಿಸರ ಮತ್ತು ಅಭಿವೃದ್ಧಿಯ ಬಗೆಗಿನ ಮೂವತ್ತೈದು ಲೇಖನಗಳಿವೆ. ಈ ಎಲ್ಲ ಲೇಖನಗಳ ತಲೆಬರಹಗಳು ಓದುಗರ ಆಸಕ್ತಿಯನ್ನು ಕೆರಳಿಸುವಂತಿದ್ದು ಕೆಲವು ಪ್ರಾಸಮಯವೂ ಆಗಿವೆ. ಉದಾಹರಣೆಗೆ_ 'ಲೋಕಲ್ ಮೊದಲು ಲೋಕದ್ದು ಆಮೇಲೆ' 'ಏಕಾಂತದಲ್ಲಿದ್ದರೇನೆ ಏಕದಂತ ವಿಘ್ನನಾಶಕ 'ಅಗ್ರಿ ಟೂರಿಸಮ್ ಅಗ್ಲಿ ಟೂರಿಸಮ್' 'ಕುರುಡು ಕಾಂಚಾಣ ಕೊಳೆಯಾಗಿತ್ತು' 'ಬಟ್ಟೆ ಬರೆಗೆ ಶುಭ್ರ ಕಾಂತಿ, ಕೆರೆಗಳಲ್ಲಿ ಹಸಿರು ಕ್ರಾಂತಿ' 'ಕಂಪನಿ ಕಪಿಗೆ ಕುಲಾಂತರಿ ಭಂಗೀಸೊಪ್ಪು' 'ಹೂಳೋಣ ಬನ್ನಿ ಹೊಂಗನಸನು', 'ಅವಿತ ಹಸಿವೆ ಹಿಂಗದ ಹಸಿವೆ' ಇತ್ಯಾದಿ. ಪ್ರತಿಯೊಂದು ಅಧ್ಯಾಯದ ಮೊದಲಲ್ಲಿ ಆಯಾ ಅಧ್ಯಾಯದ ಕೇಂದ್ರ ವಿಷಯವನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಎಲ್ಲಿಯೂ ವಿಷಯಾಂತರ ಮಾಡದೆ ಹೇಳಬೇಕಾದ್ದನ್ನು ಮಾತ್ರ ಪರಿಣಾಮಕಾರಿಯಾಗಿ ಹೇಳಿದ್ದಾರೆ ಲೇಖಕರು. ಈ ಸಣ್ಣಸಣ್ಣ ಲೇಖನಗಳಲ್ಲಿ, ಎಲ್ಲಾ ಲೇಖನಗಳ ಪರಿಚಯ ಇಲ್ಲಿ ಸಾಧ್ಯವಿಲ್ಲ. ಒಂದೆರಡರ ಬಗ್ಗೆ ಹೇಳಬಹುದು. 

ಬಡತನದ ಆಧುನೀಕರಣವೆಂಬ ಮೊದಲ ಅಧ್ಯಾಯವು, ಲೇಖಕರೇ ಹೇಳುವಂತೆ ಹೊರಟಲ್ಲಿಗೇ ಮರಳಿ ಬರುವ ಕಥಾವೃತ್ತವಾಗಿದೆ. ಕಥೆಯ ಆರಂಭದಲ್ಲಿ, ಅಭಿವೃದ್ಧಿ ಹೊಂದಿದವರ ದೃಷ್ಟಿಯಲ್ಲಿ, ಒಬ್ಬ ಹಳ್ಳಿಯ ಹೈದ ಯಾವುದೋ ಕುಗ್ರಾಮದಲ್ಲಿ, ನಾಗರಿಕ ಸೌಲಭ್ಯಗಳಿಲ್ಲದ, ಅತ್ಯಂತ ಕೆಳಮಟ್ಟದ (ಅಂದರೆ, ಗುಡಿಸಿಲನಲ್ಲಿ ವಾಸ, ಕಾಲ್ನಡಿಗೆಯಿಂದಲೇ ಓಡಾಟ, ಕುಡಿಯಲು ಹಳ್ಳದ ನೀರು, ಹಲ್ಲುಜ್ಜಲು ಬೇವಿನ ಕಡ್ಡಿ, ಮೈ ಕೈ ಕೆಸರು ಮಾಡಿಕೊಂಡು, ಜಿಗಣೆಗಳಿಂದ ಕಚ್ಚಿಸಿಕೊಂಡು ಹೊಲದಲ್ಲಿ ದುಡಿಯುತ್ತ, ಗಡ್ಡೆ ಗೆಣಸು, ಕುಟ್ಟಿದ ಅಕ್ಕಿಯ ಅನ್ನ, ಮುದ್ದೆ ಸಾರು ಊಟ ಮಾಡುತ್ತ, ಜ್ವರ ಗಿರ ಬಂದರೆ ಎಂಥದೋ ಕಷಾಯ, ಮೂಲಿಕೆ ಬೇರು ಇತ್ಯಾದಿ ಸೇವಿಸುತ್ತ, ಓದು ಬರಹ ಗೊತಿಲ್ಲದ ಈ ಗಮಾರನಿಗೆ ಅನ್ಯಾಯವಾದರೆ ಕಾನೂನಿನ ನೆರವು ಕೂಡ ಇಲ್ಲದಂತಹ, ಬೇಸರವಾದರೆ ಹಾಡು ಕುಣಿತ ಬಿಟ್ಟರೆ ಕೇಳಲು ರೇಡಿಯೋ ಇಲ್ಲದಂತಹ, ವಿದ್ಯುದ್ದೀಪವಿಲ್ಲದೆ ಕತ್ತಲೆಯಲ್ಲಿ ದೊಂದಿಯ ಬೆಳಕಿನಲ್ಲಿ) ಜೀವನ ಸಾಗಿಸುತ್ತ ಇರುವನು. ಇವನನ್ನು ಲೆತ್ತಲು ಇಡೀ ದೇಶದ ಆಡಳಿತಯಂತ್ರ ಸಿದ್ಧವಾಗುತ್ತದೆ. ಹತ್ತಾರು ಯೋಜನೆಗಳ ಮೂಲಕ ಈತನ ಜೀವನ ಸುಧಾರಿಸಲು ಪ್ರಯತ್ನ ಮಾಡುತ್ತದೆ. ಅದು ಅಸಾಧ್ಯವಾದಾಗ ಈತನ ಸಂತಾನವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ. ಈತನಿಗೆ ಏನೇನೂ ಕೊರತೆ ಆಗದಂತೆ ನೋಡಿಕೊಳ್ಳಲು ಹೊಸ ಹೊಸ ಉದ್ಯಮಗಳು ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ದಾಂಗುಡಿ ಇಡುತ್ತ ಬರುತ್ತವೆ. ಇವನ ಅಜ್ಜನ ಕಾಲದ ಹಳ್ಳಿಯ ಜೀವನ ಕ್ರಮ ಬದಲಾಗುತ್ತದೆ.ಈತನು ಈಗ ಕಾಲ್ನಡಿಗೆಯನ್ನು ಮರೆತಿದ್ದಾನೆ, ಹಲ್ಲುಜ್ಜಲು ಹತ್ತಾರು ತರದ ಬ್ರಷ್ಗಳಿವೆ ಬೆಳಗಿನ ಉಪಾಹಾರಕ್ಕಾಗಿ ರಾಗಿ ಗಂಜಿಯ ಬದಲು ಬಗೆಬಗೆಯ ಸೀರಿಯಲ್ಗಳು, ಫé್ರಿಜ್ನಲ್ಲಿಡದೆ ಹೊರಗೆ ಇಟ್ಟರೂ ಹಾಳಾಗದಂಥ ಹಾಲು, ಗಿಣ್ಣ, ಕೆಚಪ್ ಇತ್ಯಾದಿಗಳಿಂದ ಇವನ ಜೀವನ ಮಟ್ಟ ಎತ್ತರಕ್ಕೇರಿದೆ. ಆಡಳಿತ ಯಂತ್ರ, ಟೆಕ್ನಾಲಜಿಯೊಂದಿಗೆ ಈ ಆಧುನಿಕ ಮಗ ಪಕ್ಕಾ ಸಿದ್ಧಾರ್ಥನ ಹಾಗೆ ಬೆಳೆಯಬೇಕೆನ್ನುತ್ತದೆ. ಆತನಿಗೆ ದುಃಖ ದಾರಿದ್ರ್ಯ, ರೋಗ ರುಜಿನ, ವೃದ್ಧಾಪ್ಯದ ಸೋಂಕೂ ತಾಗದ ಹಾಗೆ ನೋಡಿಕೊಳ್ಳಬೇಕೆನ್ನುತ್ತದೆ. ಇದರ ಪರಿಣಾಮವಾಗಿ ಅವನು ಪ್ರಕೃತಿಯಿಂದ ಸಂಪೂರ್ಣವಾಗಿ ದೂರಾಗುತ್ತಾನೆ. ಆತನ ಜೀವನದ ಪ್ರತಿಯೊಂದು ಅಂಗವೂ ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ. ಎಲ್ಲವೂ ಕುಳಿತಲ್ಲೇ ಸಿಗುವಂತಹ ಸೌಲಭ್ಯ. ಇದರಿಂದ ವ್ಯಾಯಾಮವಿಲ್ಲದೆ ಅವನ ಆರೋಗ್ಯ ಕೆಡುತ್ತದೆ. ಅದಕ್ಕೆಲ್ಲ ಆಟೋಮ್ಯಾಟಿಕ್ ಯಂತ್ರಗಳಿವೆ,ಗುಂಡಿ ಒತ್ತಿದರೆ ಸಾಕು ನಿಂತಲ್ಲೇ ವಾಕಿಂಗ್ ಮಾಡಬಹುದು. ಆದರೂಕೂಡ ಆರೋಗ್ಯದ ಸಮಸ್ಯೆಗಳು ನಿರ್ನಾಮವಾಗುವುದಿಲ್ಲ. ರಕ್ತದ ಏರೊತ್ತಡ, ಹೃದ್ರೋಗ, ಕಿಡ್ನಿಯಲ್ಲಿ ಕಲ್ಲು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಇವಕ್ಕೆಲ್ಲ ತರತರದ ಅತ್ಯಾಧುನಿಕ ಪರಿಹಾರಗಳು ಇವೆ. ಆದರೂ ಸಹ ಮಾನಸಿಕ ಬಳಲಿಕೆ, ಕೀಲು ನೋವು, ಹೈಪರ್ ಆಸಿಡಿಟಿ ಇತ್ಯಾದಿಗಳು ಕಾಡುತ್ತವೆ. ಇವೆಲ್ಲದರ ಪರಿಹಾರಕ್ಕಾಗಿ ದೇಹಕ್ಕೆ ಕಾಯಕಲ್ಪ ಚಿಕಿತ್ಸೆಯಾಗಬೇಕು.

ಅದಕ್ಕೂ ಸಹ ನಗರದ ಹೊರ ವಲಯದಲ್ಲಿ ಪ್ರಕೃತಿ ಚಿಕಿತ್ಸಾಲಯ, ಆಯುರ್ವೇದದ ಚಿಕಿತ್ಸಾಲಯಗಳು ತಲೆಯೆತ್ತಿವೆ. ಅಲ್ಲಿ ಅವನ ಎಲ್ಲ ಸಮಸ್ಯೆಗಳಿಗೆ ನೈಸರ್ಗಿಕ ಚಿಕಿತ್ಸೆ ಮಾಡಲಾಗುತ್ತದೆ: ಮುಂಜಾನೆ ಎಳೆ ಬಿಸಿಲಿನಲ್ಲಿ ತುಸು ವಾಕಿಂಗ್, ಹಲ್ಲುಜ್ಜಲು ಬೇವಿನ ಕಡ್ಡಿ, ಮೂಲಿಕೆಗಳ ರಸ ಪೇಯ, ಮಡ್ ಬಾತ್, ಸೂರ್ಯ ಸ್ನಾನ, ಬಾಯಾರಿಕೆ ತಣಿಸಲು ಒರತೆ ನೀರು, ತ್ವಚೆಯ ತುರಿಕೆ ಇದ್ದರೆ ಇಂಬಳ ಚಿಕಿತ್ಸೆಯೂ ಇದೆ. ಇನ್ನು ಊಟಕ್ಕೆ ಕುಟ್ಟಿದ ಅಕ್ಕಿಯ ಅನ್ನ, ಹುಲ್ಲಿನ ಸಾರು. ಟಿ. ವಿ. ರೇಡಿಯೊ, ಮೊಬೈಲ್ ನಿಂದ ದೂರವಿದ್ದರೆ ಮಾನಸಿಕ ಸಾಂತ್ವನ. ಮನರಂಜನೆಗಾಗಿ ಸ್ಥಳಿಯ ಜಾನಪದ ನೃತ್ಯ ಹಾಡು ಇರುತ್ತದೆ. ಅವನು ಅಭಿವೃದ್ಧಿಯ ಎತ್ತರಕ್ಕೇರಿ ಕೊನೆಗೆ ಅನಿವಾರ್ಯವಾಗಿ ಸಾವಿರಾರು ರೂಪಾಯಿಗಳನ್ನು ವೆಚ್ಚಮಾಡಿ ತನ್ನ ಹಿಂದಿನ ಜೀವನ ರೀತಿಯನ್ನೇ ಅಳವಡಿಸಿಕೊಳ್ಳಬೇಕಾಗುತ್ತದೆ. ಬಡತನದ ಆಧುನೀಕರಣ ವೆಂಬ ಈ ಕಥೆಯನ್ನು ಲೇಖಕರು, ಇವರನ್ನೆಲ್ಲ ಅಭಿವೃದ್ಧಿಯ ಪಥಕ್ಕೆ ಹಚ್ಚಲು ಇನ್ನೆಷ್ಟು ವರ್ಷಗಳು ಬೇಕೋ?  ಎಂಬ  ಪ್ರಶ್ನೆಯೊಂದಿಗೆ  ಕೊನೆಗೊಳಿಸುತ್ತಾರೆ. ಲೇಖಕರು, ಹೊರಟಲ್ಲಿಗೇ ಮರಳಿ ಬರುವ ಮೊದಲ ಕಥಾನಕದಲ್ಲಿ, ಸಶಕ್ತವಾದ ವ್ಯಂಗ್ಯದಿಂದ ಅಭಿವೃದ್ಧಿಯ ಚಿತ್ರವನ್ನು ಸ್ವಾರಸ್ಯಕರವಾಗಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಓದುಗನು ನಿಜವಾದ ಅಭಿವೃದ್ಧಿ ಎಂದರೇನು ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

'ಹೂಳೋಣ ಬನ್ನಿ ಹೊಂಗನಸನು' ಎಂಬ ಅಧ್ಯಾಯದಲ್ಲಿ ಲೇಖಕರು, ಜೀವಿಗಳಿಗೆ ಅಪಾಯಕಾರಿ ಎನಿಸಿದ ಎಲ್ಲವನ್ನೂ ಭೂಮಿ ತೀರ ಆಳದಲ್ಲಿ ಹೂತಿಟ್ಟಿದೆ. ಚಿನ್ನ ಎನ್ನಿ, ವಜ್ರ ಎನ್ನಿ,
ಯುರೇನಿಯಂ ಎನ್ನಿ ಅಥವಾ ಪಾದರಸ, ಪೆಟ್ರೋಲು, ಬೇಕಿದ್ದರೆ ಅಂತರ್ಜಲವನ್ನೂ ಅದೇ ಪಟ್ಟಿಯಲ್ಲಿ ಸೇರಿಸಿ _ ಭೂಮಿಯನ್ನು ಅಗೆದು ಬಗೆದು ಮೇಲೆತ್ತಿ ತಂದ ಪ್ರತಿಯೊಂದು ವಸ್ತುವೂ
ಮನುಷ್ಯನಿಗೆ ಅಪಾಯಕಾರಿ ಎನಿಸಿದೆ. ಹಾಗೆ ತೆಗೆಯುತ್ತ ನಮ್ಮದೇ ಕೊಳೆಕಸವನ್ನು ಹೂಳುತ್ತ ಇಬ್ಬಗೆಯ ಅವಾಂತರವನ್ನು ಸೃಷ್ಟಿಸಿದ್ದೇವೆ......... ಮೊದಲನೆಯದಾಗಿ ಭೂಮಿಯಲ್ಲಿ ನಿಸರ್ಗವೇ ಹೂತಿಟ್ಟ ಅಪಾಯಕಾರಿ ತ್ಯಾಜ್ಯವನ್ನೆಲ್ಲ ಮೇಲೆತ್ತಿ ಜೀವಜಾಲಕ್ಕೆ ಕಷ್ಟನಷ್ಟ ತಂದಿದ್ದೇವೆ. ಎರಡನೆಯದಾಗಿ ನಾವು ನಮ್ಮದೇ ವಿಷಕಾರಿ ತ್ಯಾಜ್ಯಗಳನ್ನು ಭೂಮಿಯೊಳಕ್ಕೆ ತಳ್ಳುತ್ತ ಜೀವಜಲಕ್ಕೆ ವಿಷ ಸೇರಿಸುತ್ತಿದ್ದೇವೆ........ ಇವು ಭೂಮಿಯ ಹೊಟ್ಟೆ ಕೆಡಿಸಿವೆ; ಭೂಮಿಗೆ ಜ್ವರ ಬರಿಸಿವೆ. ಮುಂದಿನ ಪೀಳಿಗೆಗಳ ಸಾಮಾನ್ಯ ಜನರ ಬದುಕಿನ ಹೊಂಗನಸನ್ನೇ ಹೂಳುತ್ತಿವೆ ಎಂದು ಹೇಳುತ್ತಾರೆ. ಭೂಮಿಯ ಈ ಜ್ವರದ ನಿವಾರಣೆಗೆ ಲೇಖಕರು ನಿಜವಾಗಿಯೂ ಸರಳ, ಸುಂದರ ಮತ್ತು ಉದಾತ್ತವಾದ ಪರಿಹಾರವನ್ನು ಸೂಚಿಸಿದ್ದಾರೆ......ಭೂಮಿಯ ಜ್ವರ ನಿವಾರಣೆಗೆ ನಾವು ಒಂದಿಷ್ಟು ಮಾತ್ರೆ, ಲೇಹ್ಯ,  ಕಷಾಯಗಳನ್ನು ನೆಲದೊಳಕ್ಕೆ ಹೂಳೋಣ. ಮಾತ್ರೆ ಎಂದರೆ ಬೀಜಗಳು. ಲೇಹ್ಯ ಎಂದರೆ ಸಾವಯವ ದ್ರವ್ಯಗಳು.ಕಷಾಯ ಎಂದರೆ ಮಳೆ ನೀರು. ಈ ಮೂರನ್ನು ಹೂತರೆ ಸಾಕು ಅವೇ ಮುಂದಿನ ಪೀಳಿಗೆಗೆ ಹೊಂಗನಸನ್ನು ತರುವಂತಹವು. ಮನುಷ್ಯರ ಪಾಲಿಗಷ್ಟೇ ಅಲ್ಲ, ಸಕಲ ಜೀವಿಗಳಿಗೂ. ಅವೇ ನಿಜವಾದ ರತ್ನಗಳು. ಹೂಳುವುದು ಎಂದರೆ ಸಾಮಾನ್ಯವಾಗಿ ಇತಿಶ್ರೀ  ಹೇಳುವುದೆಂದೇ  ಅರ್ಥ.  ಹೊಂಗನಸುಗಳನ್ನು ಹೂಳುವುದು ಎಂದರೆ ಹೊಂಗನಸುಗಳ ಇತಿಶ್ರೀಯಾದಂತೆಯೇ ಸರಿ ಎಂಬ ಅರ್ಥ ಬರುತ್ತದೆ. ಅಪಾಯಕಾರಿ ತ್ಯಾಜ್ಯಗಳನ್ನೆಲ್ಲ ಭೂಮಿಯಲ್ಲಿ ಹೂಳುವುದರೊಂದಿಗೆ ನಾವು ನಮ್ಮ ಹೊಂಗನಸನ್ನು ಹೂಳುತ್ತಿದ್ದೇವೆ. ಆದರೆ ಬೀಜಗಳನ್ನು ಹೂಳಿದರೆ ಹೊಂಗನಸುಗಳು ಅರಳುತ್ತವೆ ಎನ್ನುತ್ತ ಲೇಖಕರು ಅದನ್ನು ಸಕಾರಾತ್ಮಕವಾದ ಅರ್ಥ ಬರುವಂತೆ ಬರೆಯುತ್ತಾರೆ. ಅಲ್ಲದೆ ಮಾನವನು ಭೂಮಿಯನ್ನು ನಿರ್ಲಕ್ಷಿಸಿ, ಸಂಪನ್ಮೂಲಗಳನ್ನು ತನ್ನ ಸ್ವಾರ್ಥಕ್ಕಾಗಿ ಅತಿಯಾಗಿ ಉಪಯೋಗಿಸಿ  ಅದರ  ವಾತಾವರಣ  ಬಿಸಿಯಾಗುವಂತೆ ಮಾಡಿದ್ದಾನೆ ಎಂದು ಹೇಳದೆ, ತನ್ನ ಕುಕರ್ಮಗಳಿಂದ ಅದಕ್ಕೆ ಜ್ವರ ಬರಿಸಿದ್ದಾನೆ ಎಂದು ಹೇಳುವುದರ ಮೂಲಕ ಓದುಗರ ಮನದಲ್ಲಿ ಭೂಮಿಯ ಬಗ್ಗೆ ಕಳಕಳಿ ಹುಟ್ಟುವಂತೆ ಮಾಡಿದ್ದಾರೆ, ಇದು ಲೇಖಕರ ವಿಶೇಷತೆ. ಲೇಖಕರ ಈ ವಿಷೇಶ ಗುಣ ಅವರ ಎಲ್ಲ ಲೇಖನಗಳಲ್ಲಿ ವ್ಯಕ್ತವಾಗುತ್ತದೆ. ಅವರು ಇನ್ನೊಂದುಕಡೆ ಹೇಳುತ್ತಾರೆ: ನಮಗೆ ಎಲ್ಲವೂ ಇಂಪೋರ್ಟೆಡ್ ಆಗಿರಬೇಕು. ಕೇವಲ ವಸ್ತುಗಳಲ್ಲ, ವಿಚಾರಗಳು ಕೂಡ ಇಂಪೋರ್ಟೆ ಡ್ ಅಗಿದ್ದರೆ ಸಾಕು ಅವುಗಳನ್ನು ಅನುಸರಿಸಲು ನಾವು ಸದಾ ಸಿದ್ಧ. ಆದ್ದರಿಂದ ಈಗ ಸ್ಲೋ ಫು಼ಡ್ ಕ್ರಾಂತಿಯನ್ನು ನಾವು ಅನುಸರಿಸಬೇಕು. ಏಕೆಂದರೆ ಅದು ಕೂಡ ಇಂಪೋರ್ಟೆಡ್, ಎಂದು ಹೇಳುತ್ತ ನಮ್ಮನ್ನು ದಾರಿಗೆ ಹಚ್ಚಲು ಪ್ರಯತ್ನಿಸುತ್ತಾರೆ ನಾಗೇಶರು. ಗಣೇಶನ ಪೂಜೆಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ತಡೆಯಲು 'ಕೆಟ್ಟದ್ದೆಲ್ಲ ಹೊರಗಿರಲಿ, ಒಳ್ಳೆಯದೆಲ್ಲ ಮನೆಯೊಳಗಿರಲಿ' ಎಂಬ ಮನೋಭಾವ ನಮ್ಮದಾಗಿರುವಾಗ ಗಣಪನೂ ಮನೆಯೊಳಗೆ, ಮನದೊಳಗೆ ಇದ್ದರೆ ಸಾಕಲ್ಲವೆ? ಎಂದು ಪ್ರಶ್ನಿಸುವ ಮೂಲಕ ನಮ್ಮನ್ನು ಎಚ್ಚರಿಸುತ್ತಾರೆ.

ಅಣೆಕಟ್ಟು ನಿರ್ಮಾಣ ಕಾರ್ಯದಲ್ಲಿ ಅನೇಕ ಹಳ್ಳಿಗಳನ್ನು, ಸಸಿ ಗಿಡಗಳನ್ನು ಮುಳುಗಡೆಯಿಂದ ರಕ್ಷಿಸಲು ಸ್ಥಳಾಂತರಿಸುವುದು ನಡೆಯುತ್ತದೆ. ಆದರೆ ಅದರಿಂದುಟಾಗುವ ಹಾನಿಯನ್ನು ತಿಳಿಸಲು ಕಿತ್ತು ನೆಡುವ ಕೃತ್ಯದಲ್ಲೇ ಜೀವಜಾಲದ ನಂಟುಗಳು ಕಿತ್ತು ಹೋಗುತ್ತವೆ. ಕರುಳು_ಬಳ್ಳಿಯ ಸಂಬಂಧವೆಂದು ನಮ್ಮನ್ನು ಕುರಿತು ನಾವು ವರ್ಣಸಿಕೊಂಡ ಹಾಗೆ ಲತೆ_ವೃಕ್ಷ, ಅಣಬೆ_ ಪಾಚಿ, ಇಬ್ಬನಿ_ ಮರಗಪ್ಪೆಯ ಸಂಬಂಧ ಕಿತ್ತು ಹೋಗುತ್ತದೆ. ಎಂದು ಬರೆಯುತ್ತ ಇವುಗಳ ಸಂಬಂಧದ ಅರಿವು ಹೃದ್ಗತವಾಗುವಂತೆ ಹೇಳುತ್ತಾರೆ. 'ಕೆಸರುಗದ್ದೆಯ ಪಾಲಿಟೆಕ್ನಿಕ್'ನಲ್ಲಿ ನಿಸರ್ಗದ ಜೊತೆ ಹೊಂದಾಣಿಕೆ ಮಾಡಿಕೊಂಡು ಬೇಸಾಯ ಮಾಡುತ್ತಿದ್ದವರನ್ನೆಲ್ಲ ದೂರಸೆಳೆದು ಬೇರೆ ಬೇರೆ ಕೆಲಸಗಳಿಗೆ ಹಚ್ಚಿದ್ದೇವೆ ಎಂಬುದನ್ನು ವಿಡಂಬನಾತ್ಮಕ ಶೈಲಿಯಲ್ಲಿ 'ನೀನು ಟಾ_ರ್ ಹಾಕು, ನೀನು ಟಾ_ರ್ಪಾಲಿನ್ ಅಂಗಡಿ ನಡೆಸು, ನೀನು ಟಾ_ರಿಕ್ ಆಮ್ಲದ ಏಜನ್ಸಿ ತಗೊ,ನೀನು ಟಾ_ರ್ಚ ಸೆಲ್ ಪ್ಯಾ಼ಕ್ಟ್ರಿ ಹಾಕು, ನೀನು ಟಾ_ರ್ಜಾನ್ ಚಿತ್ರಕ್ಕೆ ಸಂಗೀತ ಹಾಕು...... ಎಂದೆಲ್ಲ ಅಟ್ಟಿದ್ದೇವೆ. ಎಲ್ಲ ಟಾ_ಟಾ ಮಯ ಎಂದು ಹೇಳುತ್ತಾರೆ.

ಸಾವಿರಾರು ವರ್ಷಗಳಿಂದ ಪರಿಸರ ನಾಶ ಮಾಡದೆ ಅದನ್ನು ಕಾಪಾಡಿಕೊಂಡು ಬಂದ ನಮ್ಮ ಬೇಸಾಯದ ಪದ್ಧತಿಗೆ ಹೇಗೆ ಬೈ ಬೈ ಹೇಳುತ್ತಿದ್ದೇವೆ ಎಂಬುದನ್ನು ಅವರು ಸಶಕ್ತವಾಗಿ ಅಭಿವ್ಯಕ್ತಗೊಳಿಸುತ್ತಾರೆ. ತಮ್ಮ ಇನ್ನೊಂದು ಲೇಖನದಲ್ಲಿ ನಿಸರ್ಗದಲ್ಲಿ ಹುಲಿಗಳ ಸಂಖ್ಯೆ ಮುಗಿಯುತ್ತ ಬಂದಂತೆ ಪಂಜರದಲ್ಲಿನ ಹುಲಿಯನ್ನು ನೋಡಲು ಜನ ಮುಗಿಬೀಳುತ್ತಾರೆ. ಆನೆಗಳ ಸಂಖ್ಯೆ ಕಡಿಮೆಯಾದಷ್ಟೂ ಆನೆಗಳನ್ನು ಎಳೆಯರಿಗೆ ತೋರಿಸುವ ತವಕ ಹೆಚ್ಚುತ್ತದೆ. ಈಗ ಅಗೋ, ಕೃಷಿಕನಿಗಾಗಿ ಪಂಜರ ನಿರ್ಮಿಸಿ ಟಿಕೆಟ್ ಇಡುವ ಲಕ್ಷಣಗಳು ಕಾಣಬರುತ್ತಿವೆ. ಎಂಬ ಅವರ ವ್ಯಂಗ್ಯ ಮನಮುಟ್ಟುವಂತಹದು. ನಿಸರ್ಗ ವನ್ನು ಧೂಳಿಪಟಗೊಳಿಸುವ ಯಂತ್ರಗಳನ್ನು ಗುಡ್ಡಕ್ಕೆ ಅಟ್ಟುವ ಬದಲು ಬೋಳುಗುಡ್ಡಗಳನ್ನು ಸಮೃದ್ಧಗೊಳಿಸುವ ಕೈಗಳು ನಮಗಿಂದು ಬೇಕಾಗಿವೆ ಎಂದು ಹೇಳುತ್ತಾರೆ. ಯಾವುದೇ ವಿಷಯವಾಗಲಿ ಒದುಗರಿಗೆ ಮನದಟ್ಟು ಮಾಡಿಕೊಡುವುದರಲ್ಲಿ ಅವರು ನಿಷ್ಣಾತರು. ಉದಾಹರಣೆಗೆ ಅವರ ಮುನ್ನಡೆ ಸಾಕು ಹಿನ್ನಡೆ ಬೇಕು. ಎಂಬ ಲೇಖನವನ್ನು ನೋಡಬಹುದು. 96ನೇ ಪುಟದಲ್ಲಿ ಅವರು ಹೇಳಿದಂತೆ ನಕಾಶೆಯನ್ನು ತಯಾರಿಸಿದರೆ, ಜೀವ ವೈವಿಧ್ಯ, ವನ್ಯ ಸಂಪತ್ತು, ಖನಿಜ ಸಂಪತ್ತು, ಆದಿವಾಸಿಗಳು, ಗಿರಿಜನರು, ಜಲಮೂಲಗಳು ಎಲ್ಲವೂ ಹೆಚ್ಚು ಕಡಿಮೆ ಒಂದೇ ಸ್ಥಳದಲ್ಲಿರುವುದು ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ. ನಮ್ಮ ಬೇಕು ಬೇಡಗಳ ಕಾರಣಗಳನ್ನು ಲೇಖಕರು ವಿಶದವಾಗಿ ತಿಳಿಸುತ್ತಾರೆ.

ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಬಗೆಯನ್ನು ನಿರ್ಭಡೆಯಿಂದ ತಿಳಿಸುತ್ತಾರೆ. 'ದೇವರ ನೆತ್ತಿಗೆ ಚಿನ್ನದ ಟೋಪಿ' ಯಲ್ಲಿ ಮಳೆ ನೀರಿನ ಕೊಯ್ಲಿನ ಬಗ್ಗೆ ಹೇಳುತ್ತ 'ಹರನ ಜಡೆಯ ಬದಲು ಭೂದೇವಿಯ ತೊಡೆಯನ್ನೇ ಕೊರೆದು ರಂಧ್ರಮಾಡಿ ಅಭಿಷೇಕಕ್ಕೆ  ನೀರನ್ನು  ಪಡೆಯುತ್ತಿದ್ದೇವೆ........ ದೇವಸ್ಥಾನಗಳು ಹಿಂದೆಲ್ಲ ವಿದ್ಯಾಕೇಂದ್ರಗಳಾಗಿದ್ದವು. ಈಗೀಗ ಶಾಲೆಯಲ್ಲಿ ಕಲಿಸುವುದು ಮಾತ್ರ ವಿದ್ಯೆ ಎಂಬಂತಾಗಿದೆ. ಮಳೆ ಕೊಯ್ಲಿನ ತಂತ್ರ ಎಲ್ಲರಿಗೂ ಗೊತ್ತಾಗುವಂತೆ ದೇವಸ್ಥಾನದಲ್ಲಿ ಅಳವಡಿಸಿದರೆ ಅದೂ ವಿದ್ಯೆಯೇ ತಾನೆ?

ಶಾಲೆಯ ಮೆಟ್ಟಿಲು ಹತ್ತಿದವರೂ ಹತ್ತದವರೂ ದೇವಸ್ಥಾನದ ಮೆಟ್ಟಿಲನ್ನಂತೂ ಹತ್ತಿಯೇ ಹತ್ತುತ್ತಾರೆ. ಅಲ್ಲಿ ಅದರ ಪ್ರಾತ್ಯಕ್ಷಿಕೆಯನ್ನು ಇಡಬಹುದಲ್ಲ? 'ನೀವು ಏನೇ ಅನ್ನಿ ನಿಜವಾದ ಹೀರೊಗಳು ಇಂದು ಹಳ್ಳಿಯಲ್ಲಿ ಉಳುಮೆ ಮಾಡುತ್ತಿದ್ದಾರೆ ಕಷ್ಟಪಟ್ಟು ಓದಿ ಮೇಲಕ್ಕೆ ಬಂದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ಅಂಜುಬುರುಕ ಹೇಡಿ ಎನ್ನ ಬೇಕು. ಕಷ್ಟಪಟ್ಟು ಭೂಮಿಯನ್ನು ಓಲೈಸುತ್ತ ಕೆಳಕ್ಕೇ ಉಳಿದೆ ಎನ್ನುವವರಿಗೆ ಜೈ ಎನ್ನಬೇಕು'. ಎನ್ನುತ್ತ ನಿಜವಾದ ವಿದ್ಯೆ ಏನೆಂಬುದರ ಕಡೆಗೆ ಜನರ ಗಮನ ಸೆಳೆಯುತ್ತಾರೆ. ಇಂತಹ ಉದಾಹರಣೆಗಳು ಪುಸ್ತಕದ ತುಂಬ ತುಂಬಿವೆ. ಕೊನೆಯ ಲೇಖನ ದರಿದ್ರಲಕ್ಷ್ಮಿಯ ವಗರ್ಾವಣೆ ಪ್ರಸಂಗದಲ್ಲಿಯೂ ಕೂಡ ಹಳ್ಳಿಯ ಎಲ್ಲವೂ ನಗರದತ್ತ ಹೊರಟಿರುವಾಗ ದಾರಿದ್ರ್ಯ ಮಾತ್ರ ಏಕೆ ಹಳ್ಳಿಯಲ್ಲೇ ಕಾಲು ಮುರಿದುಕೊಂಡು ಬಿದ್ದಿರಬೇಕು? ಅದನ್ನೂ ನಗರಕ್ಕೆ ಸಾಗಿಸುವ ಯಶಸ್ವೀ ಯತ್ನದ ವ್ಯಂಗ್ಯದ ಸುತ್ತ ಹೆಣೆದ ಕಥಾನಕವಾಗಿದ್ದು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಈ ಪುಸ್ತಕದಲ್ಲಿಯ ರೇಖಾಚಿತ್ರಗಳನ್ನು ಲೇಖಕರೇ ಬಿಡಿಸಿದ್ದಾರೆ. ಅವುಗಳು ಅವರ ಲೇಖನದ ವಿಷಯವನ್ನು ವ್ಯಕ್ತಗೊಳಿಸುವಲ್ಲಿ ಯಶಸ್ವಿಯಾಗಿವೆ. ಉದಾಹರಣೆಗೆ: ತಾಜಮಹಲ್ ವರ್ಸಸ್

ವಂಡರ್ಗಪ್ಪೆ' ಯ ಚಿತ್ರದಲ್ಲಿ ಮಾನವ ನಿರ್ಮಿತ ತಾಜ್ ಮಹಲಿನಕ್ಕಿಂತ ಹೆಚ್ಚು ಅದ್ಭುತವಾದದ್ದು ನಿಸರ್ಗದಲ್ಲಿಯ ಬಣ್ಣದ ವಂಡರ್ ಗಪ್ಪೆ, 'ಬೇಕಿದೆ, ನಿಸರ್ಗ ಕಲ್ಯಾಣ ಇಲಾಖೆ'ಯ ಚಿತ್ರದಲ್ಲಿ, ಸಮೃದ್ಧವಾಗಿ ಬೆಳೆದ ಸಸ್ಯಗಳಲ್ಲಿ ಅನೇಕ ಜೀವಜಂತುಗಳು, 'ಮುನ್ನಡೆ ಸಾಕು ಹಿನ್ನಡೆ ಬೇಕು' ಲೇಖನದ ಚಿತ್ರದಲ್ಲಿ ಗೂಳಿಯಂತೆ ಮುನ್ನುಗ್ಗುತ್ತಿರುವ ಅಭಿವೃದ್ಧಿಯನ್ನು ಹಿಂದಕ್ಕೆ ತಳ್ಳಲು ಹಳ್ಳಿಯ ಕೆಲವೇ ಸಾಮಾನ್ಯರು ಪ್ರಯತ್ನಿಸುತ್ತಿರುವ ಭಾವ ಚೆನ್ನಾಗಿ ವ್ಯಕ್ತವಾಗುತ್ತದೆ. ಲೇಖಕರು ಕೇವಲ ಬರಹಗಾರರಲ್ಲ. ಪರಿಸರದ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಆಭಿವೃದ್ಧಿಯ ಅಂದ- ಯುಗ, ಕಥೆ ಪುಸ್ತಕ ಅಥವಾ ಕಾದಂಬರಿಯಲ್ಲದಿದ್ದರೂ ಆಸಕ್ತಿಪೂರ್ಣವಾಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅನೇಕ ಮಾಹಿತಿಗಳಿಂದ ತುಂಬಿದ್ದರೂ ಎಲ್ಲಿಯೂ ನೀರಸವಾಗಿಲ್ಲ. ಅವರ ಲೇಖನಗಳು ಪರಿಸರದ ಬಗ್ಗೆ, ಸಾಮಾನ್ಯ ರೈತನ ಬಗ್ಗೆ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತವೆ. ಇದು ಎಲ್ಲರೂ ಓದಬೇಕಾದ ಪುಸ್ತಕ. ವಿಶೇಷವಾಗಿ ಇದರಲ್ಲಿಯ ವಿಷಯಗಳನ್ನು ಮಕ್ಕಳ ಮುಂದೆ ತೆರೆದಿಡುವುದು ನಮ್ಮೆಲ್ಲರ ಕರ್ತವ್ಯ ಎನಿಸುತ್ತದೆ. ಯುವಕರನ್ನು ಇದರಲ್ಲಿಯ ವಿಷಯಗಳ ಬಗ್ಗೆ ಚರ್ಚೆಗೆ ಸೆಳೆದು, ಅಭಿವೃದ್ಧಿ ಎಂದರೆ ಏನೆಂದು ಅವರಿಗೆ ತಿಳಿಯಪಡಿಸುವುದು ಅತ್ಯಂತ ಮಹತ್ವದ ಕೆಲಸ. 

No comments:

Post a Comment